ಏ.1 ರಿಂದ ಹಣಕಾಸು ನಿಯಮಗಳಲ್ಲಿ ಹಲವಾರು ಬದಲಾವಣೆಗಳು ಜಾರಿಗೆ ಬರಲಿದ್ದು, ತೆರಿಗೆದಾರರು, ಯುಪಿಐ(UPI) ಬಳಕೆದಾರರು, ಕ್ರೆಡಿಟ್ ಕಾರ್ಡ್ ಹೊಂದಿರುವವರು ಮತ್ತು ಪಿಂಚಣಿದಾರರ ಮೇಲೆ ಇದು ಪರಿಣಾಮ ಬೀರಲಿದೆ. 2025-26ರ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ, ಆದಾಯ ತೆರಿಗೆ, ಕ್ರೆಡಿಟ್ ಕಾರ್ಡ್ಗಳು, ಯುಪಿಐ ಭದ್ರತೆ, ಜಿಎಸ್‌ಟಿ ಹಾಗೂ ಬ್ಯಾಂಕಿಂಗ್ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಿದೆ.
2025ರ ಕೇಂದ್ರ ಬಜೆಟ್‌ನಲ್ಲಿ ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್‌ಗಳು ಮತ್ತು ಕಡಿತಗಳನ್ನು ಪರಿಚಯಿಸಿದೆ. ಅವುಗಳನ್ನು ಈದೀಗ ಜಾರಿಗೆ ತರಲಾಗುತ್ತಿದ್ದು, ಹೊಸ ತೆರಿಗೆ ಪದ್ಧತಿಯಡಿಯಲ್ಲಿ ವರ್ಷಕ್ಕೆ 12 ಲಕ್ಷ ರೂ.ವರೆಗೆ ಗಳಿಸುವವರು ಆದಾಯ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆಯುತ್ತಾರೆ. ಅದಕ್ಕೂ ಹೆಚ್ಚು ಸಂಬಳ ಪಡೆಯುವವರು 75,000 ರೂ.ಗಳ ಪ್ರಯೋಜನ ಪಡೆಯುತ್ತಾರೆ, ಇದರಿಂದಾಗಿ 12.75 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯವು ತೆರಿಗೆ ಮುಕ್ತವಾಗಿರುತ್ತದೆ.
ಯುಪಿಐ ನಿಯಮಗಳು:
ಏ.1 ರಿಂದ ನಿಷ್ಕ್ರಿಯ ಮೊಬೈಲ್ ಸಂಖ್ಯೆಗಳಿಂದ ಯುಪಿಐ ವಹಿವಾಟು ನಡೆಸಲಾಗುವುದಿಲ್ಲ. ಭದ್ರತೆಯನ್ನು ಹೆಚ್ಚಿಸಲು, ಬ್ಯಾಂಕ್‌ಗಳು ಮತ್ತು ಫೋನ್ ಪೇ ಮತ್ತು ಗೂಗಲ್ ಪೇನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ ದೀರ್ಘಕಾಲದವರೆಗೆ ಬಳಕೆಯಾಗದೆ ಉಳಿದಿರುವ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಖಾತೆಗಳನ್ನು ಹಂತಹಂತವಾಗಿ ರದ್ದುಗೊಳಿಸಲು ಸೂಚಿಸಲಾಗಿದೆ. ಹೀಗಾಗಿ ಏ.1ರ ಮೊದಲು ಮೊಬೈಲ್ ಸಂಖ್ಯೆಗಳನ್ನು ನವೀಕರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಆದೇಶಿಸಿದೆ.
ಕನಿಷ್ಠ ಬ್ಯಾಲೆನ್ಸ್:
ಬ್ಯಾಂಕಿಂಗ್ ವಲಯದಲ್ಲಿ, ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾದಂತಹ ಪ್ರಮುಖ ಬ್ಯಾಂಕ್‌ಗಳು ಕನಿಷ್ಠ ಬ್ಯಾಲೆನ್ಸ್ ನಿಯಮಗಳನ್ನು ನವೀಕರಿಸುತ್ತಿದ್ದು, ಪರಿಷ್ಕೃತ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ ಗ್ರಾಹಕರು ಹೊಸ ಬ್ಯಾಂಕಿಂಗ್ ಮಾರ್ಗಸೂಚಿಗಳ ಪ್ರಕಾರ ದಂಡ ಪಾವತಿಸಬೇಕಾಗುತ್ತದೆ.
ಪಿಂಚಣಿ ಯೋಜನೆ:
ಮತ್ತೊಂದು ಮಹತ್ವದ ಆರ್ಥಿಕ ಬದಲಾವಣೆಯೆಂದರೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಬದಲಾಯಿಸುವ ಏಕೀಕೃತ ಪಿಂಚಣಿ ಯೋಜನೆ. 2024ರ ಆಗಸ್ಟ್ನಲ್ಲಿ ಪರಿಚಯಿಸಲಾದ ಯುಪಿಎಸ್, ಏ.1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಬದಲಾವಣೆಯಿಂದ ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರ ಮೇಲೆ ಪರಿಣಾಮ ಬೀರಲಿದೆ. ಕನಿಷ್ಠ 25 ವರ್ಷಗಳ ಸೇವೆಯನ್ನು ಹೊಂದಿರುವವರು ತಮ್ಮ ಕೊನೆಯ 12 ತಿಂಗಳ ಸರಾಸರಿ ಮೂಲ ವೇತನದ ಶೇ.50 ರಷ್ಟಕ್ಕೆ ಸಮಾನವಾದ ಪಿಂಚಣಿಯನ್ನು ಪಡೆಯಲಿದ್ದಾರೆ.
Leave a Reply