ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ: 40 ಅಲ್ಲ 400 ಜನರಿಗೆ ಹನಿಟ್ರ್ಯಾಪ್

40 ನಾಯಕರಲ್ಲ, ಕನಿಷ್ಠ 400 ಜನರನ್ನೂ ಹನಿಟ್ರ್ಯಾಪ್‌ಗೆ (honeytrap) ಬಲಿ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರಾಜ್ಯದಿಂದ ಮಾತ್ರವಲ್ಲ, ದೆಹಲಿಯ ಅನೇಕ ನಾಯಕರು ಮತ್ತು ಅಧಿಕಾರಿಗಳನ್ನು ಕೂಡ ಹನಿಟ್ರ್ಯಾಪ್‌ಗೆ ಬಲಿ ಮಾಡಲಾಗಿದೆ ಎಂದು ಅವರು ಹೇಳಿದರು. ಸರ್ಕಾರ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಎಲ್ಲಾ ಪಕ್ಷಗಳ ನಾಯಕರನ್ನು ಇದರಲ್ಲಿ ಸಿಲುಕಿಸಲಾಗಿದೆ. ಹನಿಟ್ರ್ಯಾಪ್ ಮಾಡುವ ಪ್ರಯತ್ನಗಳ ವಿರುದ್ಧ ದೂರು ದಾಖಲಿಸುವಂತೆ ಸಚಿವ ರಾಜಣ್ಣ ಅವರಿಗೆ ನಾನೇ ಹೇಳಿದ್ದೆ ಎಂದು ತಿಳಿಸಿದರು. ಹನಿಟ್ರ್ಯಾಪ್ ಮಾಡಿ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕಿರುವ ನಿದರ್ಶನಗಳು ಈ ಹಿಂದೆಯೂ ನಡೆದಿವೆ ಎಂದು ಅವರು ಹೇಳಿದರು. ತಮ್ಮ ಕೆಲಸ ಸಾಧಿಸಲು ಹನಿಟ್ರ್ಯಾಪ್ ಮಾಡಿ ಅಧಿಕಾರಿಗಳನ್ನು ಅವರು ಬ್ಲ್ಯಾಕ್‌ಮೇಲ್ ಮಾಡುತ್ತಾರೆ ಎಂದು ಅವರು ಹೇಳಿದರು.

ಕಳೆದ 20 ವರ್ಷಗಳಿಂದಲೂ ಹನಿಟ್ರ್ಯಾಪ್ ಆಗಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಅಂತ್ಯ ಹಾಡಬೇಕು. ದೆಹಲಿ ನಾಯಕರು ಪಾಪ ಅಮಾಯಕರು, ಅವರೂ ಹನಿಟ್ರ್ಯಾಪ್​​ಗೆ ಬಲೆಗೆ ಬಿದ್ದಿದ್ದಾರೆ. ಎಲ್ಲ ಪಕ್ಷದ ನಾಯಕರನ್ನೂ ಹನಿ ಟ್ರ್ಯಾಪ್ ಮಾಡಲಾಗಿದೆ. ಮೀನಿಗೆ ಬಲೆ ಬೀಸಿದಂತೆ ಬೀಸಿ ಹನಿಟ್ರ್ಯಾಪ್ ಮಾಡಿ ಅವರನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಚಿವ ಜಾರಕಿಹೊಳಿ ಆರೋಪ ಮಾಡಿದ್ದಾರೆ

ಮಾಜಿ ಸಚಿವ ಮತ್ತು ಶಾಸಕ ಆರ್‌ವಿ ದೇಶಪಾಂಡೆ ಹನಿಟ್ರ್ಯಾಪ್‌ಗೆ ಬಲಿಯಾದವರನ್ನು ಮೂರ್ಖರು ಎಂದು ಹೇಳಿದ್ದಾರೆ. ಹನಿಟ್ರ್ಯಾಪ್‌ನಲ್ಲಿ ಭಾಗಿಯಾಗಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ರಾಜಕೀಯದಲ್ಲಿರುವವರು ಪ್ರತಿ ಹೆಜ್ಜೆಯಲ್ಲೂ ಜಾಗರೂಕರಾಗಿರಬೇಕು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಒಮ್ಮೆ ಹತ್ಯೆಯಾದರೆ, ಆ ಸ್ಥಾನಮಾನವನ್ನು ಮರಳಿ ಪಡೆಯುವುದು ಕಷ್ಟ ಎಂದು ಅವರು ಹೇಳಿದರು.

 

Leave a Reply

Your email address will not be published. Required fields are marked *