Heart attack: ಹೃದಯ ಅಸಹಜವಾಗಿ ಅಥವಾ ಅತಿಯಾಗಿ ಬಡಿದುಕೊಳ್ಳುತ್ತಿದೆಯೇ?

ವೈದ್ಯರ ಬಳಿ ಹೋದಾಗ ವೈದ್ಯರು ಸ್ಟೆತಸ್ಕೋಪ್‌ನಿಂದ ಮೊದಲು ಹೃದಯದ ಬಡಿತವನ್ನು ಪರೀಕ್ಷಿಸುತ್ತಾರೆ. ಹಾರ್ಟ್ ಬೀಟ್ ಹೃದಯ ಬಡಿತದ ಅಳತೆಯಾಗಿದೆ. ಹೃದಯ ಬಡಿತ ಅಥವಾ ಹೃದಯ ಬಡಿತದ ದರವು, ನಮ್ಮ ಹೃದಯವು ನಿಮಿಷಕ್ಕೆ ಎಷ್ಟು ಬಾರಿ ಬಡಿಯುತ್ತದೆ ಎಂಬುದನ್ನು ಸೂಚಿಸುತ್ತದೆ.

ಇದು ನಮ್ಮ ಹೃದಯದ ಆರೋಗ್ಯದ ನಿಯತಾಂಕ ಮಾತ್ರವಲ್ಲ, ನಮ್ಮ ದೇಹದ ಫಿಟ್ನೆಸ್ ಮತ್ತು ಒತ್ತಡದ ಮಟ್ಟವನ್ನು ಕೂಡ ಸೂಚಿಸುತ್ತದೆ. ಸಾಮಾನ್ಯ ಹೃದಯ ಬಡಿತ ನಿಮಿಷಕ್ಕೆ 60 ರಿಂದ 100 ಬಾರಿ ಬಡಿಯುತ್ತದೆ. ಒಂದು ವೇಳೆ ನಿಮ್ಮ ಹೃದಯದ ಬಡಿತವು ನಿಮಿಷಕ್ಕೆ 100 ಕ್ಕಿಂತ ಹೆಚ್ಚು ಅಥವಾ 60 ಕ್ಕಿಂತ ಕಡಿಮೆ ಇದ್ದರೆ ಅದು ಅಪಾಯದ ಸೂಚನೆಯಾಗಿರಬಹುದು.

 

ಸಾಮಾನ್ಯ ಹೃದಯ ಬಡಿತ ಎಂದರೆ ನಿಮ್ಮ ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡುತ್ತಿದೆ ಎಂದರ್ಥ, ಆದರೆ ಅಪಾಯಕಾರಿ ಹೃದಯ ಬಡಿತವು ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ವಿಶ್ರಾಂತಿಯಲ್ಲಿರುವ ಹೃದಯ ಬಡಿತವನ್ನು ವಿಶ್ರಾಂತಿ ಹೃದಯ ಬಡಿತ ಎಂದು ಕರೆಯಲಾಗುತ್ತದೆ. ಸಕ್ರಿಯ ಸ್ಥಿತಿಯಲ್ಲಿರುವ ಹೃದಯ ಬಡಿತವನ್ನು ಸಕ್ರಿಯ ಹೃದಯ ಬಡಿತ ಎಂದು ಕರೆಯಲಾಗುತ್ತದೆ, ಎರಡೂ ವಿಭಿನ್ನ ಸಾಮಾನ್ಯ ಮತ್ತು ಅಪಾಯದ ವ್ಯಾಪ್ತಿಯನ್ನು ಹೊಂದಿವೆ. ಹೃದಯ ಬಡಿತವು ವಯಸ್ಸು, ಆರೋಗ್ಯ ಸ್ಥಿತಿ, ವ್ಯಾಯಾಮ, ಔಷಧಿಗಳು ಮತ್ತು ಒತ್ತಡದಂತಹ ಹಲವು ಅಂಶಗಳಿಂದ ಪ್ರಭಾವಿತವಾಗಿರುತ್ತದೆ.

ಆರೋಗ್ಯಕರ ಹೃದಯಕ್ಕೆ ಸಾಮಾನ್ಯ ಹೃದಯ ಬಡಿತದ ವ್ಯಾಪ್ತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ, ಆದರೆ ಅಪಾಯಕಾರಿ ಹೃದಯ ಬಡಿತವನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸುವುದರಿಂದ ಹೃದ್ರೋಗ, ಪಾರ್ಶ್ವವಾಯು ಅಥವಾ ಇತರ ಹೃದಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಯಾವುದೇ ಅಸಹಜತೆ ಕಂಡುಬಂದರೆ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗುತ್ತದೆ.

ಅಸಹಜ ಹೃದಯ ಬಡಿತವೆಂದರೇನು?

  • ಅಸಹಜ ಹೃದಯ ಬಡಿತವು ಅಪಾಯಕಾರಿ ಹೃದಯ ಬಡಿತದ ವರ್ಗಕ್ಕೆ ಸೇರುತ್ತದೆ. ಈ ಸಮಸ್ಯೆಯು ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಅಸಹಜ ಹೃದಯ ಬಡಿತದಲ್ಲಿ ಎರಡು ವಿಧವಿದೆ. ಒಂದು ಅತಿ ವೇಗದ ಬಡಿತ (ಟಾಕಿಕಾರ್ಡಿಯಾ). ಮತ್ತೊಂದು ನಿಧಾನಗತಿಯ ಬಡಿತ ಅಥವಾ ಅನಿಯಮಿತ ಬಡಿತ (ಬ್ರಾಡಿಕಾರ್ಡಿಯಾ).
  • ಪ್ರತಿ ನಿಮಿಷಕ್ಕೆ 100ಕ್ಕೂ ಹೆಚ್ಚು ಬಡಿತಗಳಿದ್ದರೆ ಅದನ್ನು ಟಾಕಿಕಾರ್ಡಿಯಾ ಎನ್ನಲಾಗುತ್ತದೆ. ಗಂಟೆಗೆ 60ಕ್ಕಿಂತ ಕಡಿಮೆ ಬಡಿತಗಳಿದ್ದರೆ ಬ್ರಾಡಿಕಾರ್ಡಿಯಾ ಎನ್ನಲಾಗುತ್ತದೆ. ಈ ಎರಡೂ ಪರಿಸ್ಥಿತಿಯಲ್ಲಿ ಹೃದಯವು ಸಾಕಷ್ಟು ರಕ್ತವನ್ನು ಪಂಪ್‌ ಮಾಡಲು ಕಷ್ಟಪಡುತ್ತದೆ. ಅಕಾಲಿಕ ಹೃದಯ ಬಡಿತಗಳು ಕೆಲವೊಮ್ಮೆ ಹಾನಿಕಾರಕ ಎನಿಸದೇ ಇದ್ದರೂ ಹೃದಯ ಸೇರಿದಂತೆ ಇತರೆ ಅಂಗಾಂಗಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವನ್ನುಂಟು ಮಾಡುತ್ತದೆ.
  • ಹೃದಯಕ್ಕೆ ಸಾಕಷ್ಟು ಆಮ್ಲಜನಕಯುಕ್ತ ರಕ್ತ ಪೂರೈಕೆಯಾಗದ ಸ್ಥಿತಿಯನ್ನು ಆಂಜಿನಾ ಎಂದು ಕರೆಯಲಾಗುತ್ತದೆ. ಇದರಿಂದ ಎದೆನೋವು ಅಥವಾ ಅಸ್ವಸ್ಥತತೆ ಉಂಟಾಗುತ್ತದೆ. ಹೃದಯ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದು ರೋಗ ಅಲ್ಲದೇ ಇರಬಹುದು. ಆದರೆ, ಅಪಧಮನಿಯಲ್ಲಿ ಮುಂದೆ ಉಂಟಾಗುವ ತೊಂದರೆಗಳ ಸೂಚನೆಯೂ ಆಗಿರಬಹುದು. ನಿಯಮಿತವಾಗಿ ಇಂತಹ ಸಮಸ್ಯೆ ಉಂಟಾಗುತ್ತಿದ್ದೆ ಹೃದಯದ ಸ್ನಾಯುಗಳಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆ ಹೆಚ್ಚು.
  • ಹೃದ್ರೋಗಕ್ಕೆ ಕಾರಣಗಳೇನು?

    • ಇತ್ತೀಚಿನ ದಿನಗಳಲ್ಲಿ ಒತ್ತಡಗಳಿಂದ ಹೃದಯ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒತ್ತಡದಿಂದ ಪ್ಯಾನಿಕ್ ಅಟ್ಯಾಕ್ ಸಮಸ್ಯೆ ಎದುರಾಗುತ್ತಿದ್ದು, ಕೆಲವರು ಪ್ಯಾನಿಕ್ ಅಟ್ಯಾಕ್’ಗೆಂದು ಸೂಕ್ತವಲ್ಲದ ಸ್ವಯಂಪ್ರೇರಿತ ಮಾತ್ರಗಳನ್ನು ಸೇವನೆ ಮಾಡುತ್ತಿದ್ದಾರೆ. ಈ ಮಾತ್ರೆಗಳನ್ನು ಕೆಲ ಕಾಲ ತೆಗೆದುಕೊಂಡು ಇದ್ದಕ್ಕಿದ್ದಂತೆ ಬಿಡುವುದರಿಂದಲೂ ಹೃದ್ರೋಗ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಅಲ್ಲದೆ, ಅತಿಯಾದ ಆಲ್ಕೋಹಾಲ್ ಅಥವಾ ಕೆಫೀನ್ ಸೇವಿಸುವವರಿಗೂ ಈ ಸಮಸ್ಯೆ ಹೆಚ್ಟಾಗಿ ಕಾಣಿಸಿಕೊಳ್ಳುತ್ತದೆ.
    • ಕಡಿಮೆ ಹಿಮೋಗ್ಲೋಬಿನ್ ಅಥವಾ ರಕ್ತಹೀನತೆ, ಥೈರೋಟಾಕ್ಸಿಕೋಸಿಸ್ (ಹೆಚ್ಚುವರಿ ಥೈರಾಯ್ಡ್ ಹಾರ್ಮೋನುಗಳು) ಇತರ ಸಾಮಾನ್ಯ ಕಾರಣಗಳಿಂದಲೂ ಸಮಸ್ಯೆ ಎದುರಾಗಬಹುದು.

    ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

    • ಹೃದಯ ಬಡಿತವು ನಿಮ್ಮ ದೈಹಿಕ ಆರೋಗ್ಯವನ್ನು ಬಹಿರಂಗಪಡಿಸುವುದಲ್ಲದೆ, ಒತ್ತಡ, ನಿರ್ಜಲೀಕರಣ ಮತ್ತು ನಿದ್ರೆಯ ಗುಣಮಟ್ಟವನ್ನು ಸಹ ಸೂಚಿಸುತ್ತದೆ. ಹೃದಯ ಬಡಿತದಲ್ಲಿ ದೀರ್ಘಕಾಲದ ಅಡಚಣೆಗಳು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
    • ನಿಮಗೆ ತಲೆತಿರುಗುವಿಕೆ, ಆಯಾಸ ಅಥವಾ ಎದೆ ನೋವು ಅನಿಸಿದರೆ ವೈದ್ಯರನ್ನು ಸಂಪರ್ಕಿಸಿ.
    • ವಿಶ್ರಾಂತಿಯಲ್ಲಿ ನಿಮ್ಮ ಹೃದಯ ಬಡಿತ ನಿಮಿಷಕ್ಕೆ 50 ಬಡಿತಗಳಿಗಿಂತ ಕಡಿಮೆಯಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ.
    • ವ್ಯಾಯಾಮದ ಸಮಯದಲ್ಲಿ ಅಥವಾ ಸಾಮಾನ್ಯ ಸ್ಥಿತಿಯಲ್ಲಿ ಹೃದಯ ಬಡಿತ ನಿಮಿಷಕ್ಕೆ 120 ಬಡಿತಗಳಿಗಿಂತ ಹೆಚ್ಚಿದ್ದರೆ ಮತ್ತು ವಿಶ್ರಾಂತಿಯ ನಂತರವೂ ಸಾಮಾನ್ಯವಾಗದಿದ್ದರೆ, ವೈದ್ಯರನ್ನು ಸಂಪರ್ಕಿಸಿ.
    • ಹೃದಯ ಬಡಿತವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದು ಮುಖ್ಯ. ಯಾವುದೇ ಅಸಹಜತೆ ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ವ್ಯಾಯಾಮದಿಂದ ಸಾಮಾನ್ಯ ಹೃದಯ ಬಡಿತವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.

    ಮುಂಜಾಗ್ರತೆ ವಹಿಸುವುದು ಹೇಗೆ?

    • ಸ್ಮಾರ್ಟ್ ವಾಚ್‌ಗಳು ಅಥವಾ ಆಕ್ಸಿಮೀಟರ್‌ನಂತಹ ಸಾಧನಗಳನ್ನು ಬಳಸಿಕೊಂಡು ಮೇಲ್ವಿಚಾರಣೆ ಮಾಡುವುದು ಉತ್ತಮ.
    • ಸಮಸ್ಯೆ ತೀವ್ರವಾಗಿದೆ ಎನಿಸಿದರೆ ವೈದ್ಯರ ನೆರವು ಪಡೆಯುವುದು ಉತ್ತಮ.
    • ಹೃದಯಲ್ಲಿ ನೋವು, ಹೃದಯ ಬಡಿತ ಹೆಚ್ಚಾಗಿದೆ ಎಂದೆನಿಸುತ್ತಿದ್ದರೆ ಇಸಿಜಿ ಮಾಡಿಸುವುದು ಉತ್ತಮ ಮಾರ್ಗವಾಗಿದೆ.

    ಚಿಕಿತ್ಸೆ ಹೇಗೆ?

    • ರೋಗನಿರ್ಣಯದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಹೃದಯ ಬಡಿತ ಹೆಚ್ಚಳಕ್ಕೆ ಕಾರಣವಾಗುವ ಒತ್ತಡ, ಆತಂಕ ಮತ್ತು ಪ್ಯಾನಿಕ್ ಅಟ್ಯಾಕ್‌ಗಳನ್ನು ಸಮಾಲೋಚನೆ ಅಥವಾ ಕೆಲವೊಮ್ಮೆ ಅಲ್ಪಾವಧಿಯ ಔಷಧಿಗಳೊಂದಿಗೆ ನಿರ್ವಹಿಸಬಹುದು.
    • ರೋಗನಿರ್ಣಯ ಮಾಡಿದ ನಂತರ ಹೃದಯ ಬಡಿತದ ಆರ್ಹೆತ್ಮಿಯಾಗಳನ್ನು ಔಷಧಿಗಳೊಂದಿಗೆ ಅಥವಾ ಅಗತ್ಯವಿದ್ದರೆ, ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ (ಪ್ರಕಾರವನ್ನು ಅವಲಂಬಿಸಿ) ಮೂಲಕ ನಿರ್ವಹಿಸಬಹುದು.
    • ರಕ್ತಹೀನತೆ ಅಥವಾ ಇತರೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೂಲಕವೂ ಸಮಸ್ಯೆಯನ್ನು ದೂರಾಗಿಸಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *