ಸುಗಮ ಸಂಚಾರಕ್ಕೆ ಹೊಸ ಮೆರುಗು: ಸವದತ್ತಿಯ ಬಸವೇಶ್ವರ ವೃತ್ತ ಅಭಿವೃದ್ಧಿಗೆ ಭೂಮಿ ಪೂಜೆ..!

₹2.15 ಕೋಟಿ ವೆಚ್ಚದಲ್ಲಿ ಸವದತ್ತಿಯ ಬಸವೇಶ್ವರ ವೃತ್ತ ಅಭಿವೃದ್ಧಿಗೆ ಭೂಮಿ ಪೂಜೆ

ಸವದತ್ತಿ: ಪಟ್ಟಣದ ಪ್ರಮುಖ ಸಂಚಾರ ಕೇಂದ್ರವಾಗಿರುವ ಶ್ರೀ ಬಸವೇಶ್ವರ ವೃತ್ತ (ಕರೀಕಟ್ಟಿ ಕ್ರಾಸ್) ನಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಹಮ್ಮಿಕೊಂಡಿರುವ ವೃತ್ತ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು.

ಲೋಕೋಪಯೋಗಿ ಇಲಾಖೆಯ ಕೆಶಿಪ್–ಎಡಿಬಿ (KSHIP–ADB) ಯೋಜನೆಯಡಿ ಅಂದಾಜು ₹2.15 ಕೋಟಿ ವೆಚ್ಚದಲ್ಲಿ ಈ ವೃತ್ತವನ್ನು ಅತ್ಯಾಧುನಿಕ ಟ್ರಾಫಿಕ್ ಜಂಕ್ಷನ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ವೈಜ್ಞಾನಿಕ ವಿನ್ಯಾಸದ ಮೂಲಕ ವಾಹನಗಳ ಸುಗಮ ಸಂಚಾರ, ಸಾರ್ವಜನಿಕರ ಸುರಕ್ಷತೆ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ.

ಯೋಜನೆಯಡಿ ಆಧುನಿಕ ರಸ್ತೆ ದೀಪಗಳು, ಸಂಚಾರ ಸೂಚನಾ ಫಲಕಗಳು ಹಾಗೂ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಲಾಗುವುದರಿಂದ ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗಲಿದೆ. ಸವದತ್ತಿ ಪಟ್ಟಣದ ಪ್ರವೇಶ ದ್ವಾರದಂತಿರುವ ಈ ವೃತ್ತದ ಅಭಿವೃದ್ಧಿಯು ನಗರ ಮೂಲಸೌಕರ್ಯಕ್ಕೆ ಹೊಸ ಆಯಾಮ ನೀಡಲಿದೆ.

ಈ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *