ಏಕದಿನ ಕ್ರಿಕೆಟ್ ನಲ್ಲಿ ‘two-ball rule’ ಪರಿಚಯಕ್ಕೆ ICC ಸಿದ್ಧತೆ!

two-ball rule in odi

ಏಕದಿನ ಕ್ರಿಕೆಟ್ ಗೆ ಮತ್ತೆ ಹಳೆಯ ರೂಪ ನೀಡಲು ಮುಂದಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಹೊಸ ನಿಯಮ ಜಾರಿಗೆ ಮುಂದಾಗಿದೆ. ಹೌದು.. ಗಮನಾರ್ಹ ಬೆಳವಣಿಗೆಯಲ್ಲಿ, ಐಸಿಸಿ ಏಕದಿನ ಕ್ರಿಕೆಟ್‌ನಲ್ಲಿ ಎರಡು ಚೆಂಡು( two-ball rule)ಗಳ ನಿಯಮ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಐವತ್ತು ಓವರ್‌ಗಳ ಏಕದಿನ ಕ್ರಿಕೆಟ್ ಸ್ವರೂಪದಲ್ಲಿ 2 ಚೆಂಡುಗಳ ನಿಯಮ ಜಾರಿ ಮಾಡಬೇಕು ಎಂಬುದು ಕೆಲವು ವರ್ಷಗಳಿಂದ ಚಾಲ್ತಿಯಲ್ಲಿರುವ ಬೇಡಿಕೆಯಾಗಿದೆ.

ಏಕದಿನ ಕ್ರಿಕೆಟ್ ನಲ್ಲಿ ಬದಲಾದ ನಿಯಮಗಳಿಂದಾಗಿ ಬೌಲರ್ ಗಳು ಸಮರ್ಥ ಪ್ರದರ್ಶನ ತೋರಲು ಆಗುತ್ತಿಲ್ಲ ಎಂಬ ವಾದವಿದೆ. ಅಲ್ಲದೆ ಇದಕ್ಕೆ ಇಂಬು ನೀಡುವಂತೆ ಪವರ್ ಪ್ಲೇ ನಿಯಮ ಬಂದ ಬಳಿಕ ಏಕದಿನ ಕ್ರಿಕೆಟ್ ನಲ್ಲಿ ರನ್ ಹೊಳೆಯೇ ಹರಿಯುತ್ತಿದೆ. ಇದೇ ಕಾರಣಕ್ಕಾಗಿ ಮಾಜಿ ಬೌಲರ್ ಗಳು ಮತ್ತು ಕ್ರಿಕೆಟ್ ತಜ್ಞರು ಏಕದಿನ ಕ್ರಿಕೆಟ್ ಸಾಯುತ್ತಿದೆ. ಅಮೂಲಾಗ್ರ ಬದಲಾವಣೆ ಅಗತ್ಯವಿದೆ ಎಂದು ವಾದಿಸುತ್ತಿದ್ದರು.

2 ಹೊಸ ಚೆಂಡು ನಿಯಮಕ್ಕೆ ಬೌಲರ್ ಗಳಿಂದಲೇ ವಿರೋಧ

ಇನ್ನು ಅಚ್ಚರಿ ಎಂದರೆ ಐಸಿಸಿ ಜಾರಿ ತರಲು ಮುಂದಾಗಿರುವ 2 ಚೆಂಡುಗಳ ನಿಯಮಕ್ಕೆ ಕೆಲ ಬೌಲರ್ ಗಳೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೆಲ ಬೌಲರ್ ಗಳು ಮತ್ತು ಮಾಜಿ ಆಟಗಾರರು 2 ಹೊಸ ಚೆಂಡುಗಳ ನಿಯಮದ ವಿರುದ್ಧ ಐಸಿಸಿ ಬಳಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಏಕದಿನ ಕ್ರಿಕೆಟ್ ನಲ್ಲಿ 2 ಹೊಸ ಚೆಂಡುಗಳನ್ನು ಪರಿಚಯಿಸಿದರೆ, ರಿವರ್ಸ್ ಸ್ವಿಂಗ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಬ್ಯಾಟರ್ ಗಳಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಆರೋಪಿಸಿದ್ದಾರೆ. ಆದಾಗ್ಯೂ, ಐಸಿಸಿ ಈ ನಿಯಮ ಜಾರಿಗೆ ಬದ್ಧವಾಗಿದ್ದು, ತಿದ್ದುಪಡಿಯೊಂದಿಗೆ ನಿಯಮ ಜಾರಿ ಮಾಡಲು ನೋಡುತ್ತಿದೆ ಎಂದು ಹೇಳಲಾಗಿದೆ.

ತಲಾ 25 ಓವರ್ ಗೆ ಒಂದು ಹೊಸ ಚೆಂಡು

ಇನ್ನು ಐಸಿಸಿ ಆಲೋಚಿಸುತ್ತಿರುವಂತೆ ತಲಾ 25 ಓವರ್ ಗೆ ಒಂದು ಹೊಸ ಚೆಂಡು ನೀಡಲು ಐಸಿಸಿ ಚಿಂತನೆಯಲ್ಲಿದೆ. ಹೊಸ ಪ್ರಸ್ತಾವಿತ ಯೋಜನೆಯ ಪ್ರಕಾರ, ಒಂದು ತಂಡವು ಮೊದಲ 25 ಓವರ್‌ಗಳವರೆಗೆ ಎರಡು ಹೊಸ ಚೆಂಡುಗಳನ್ನು ಬಳಸಬಹುದು. 26ನೇ ಓವರ್‌ನಿಂದ, ಉಳಿದ ಇನ್ನಿಂಗ್ಸ್‌ಗೆ ಅವರಿಗೆ ಕೇವಲ ಒಂದು ಚೆಂಡನ್ನು ಮಾತ್ರ ಬಳಸಲು ಅವಕಾಶವಿರುತ್ತದೆ ಮತ್ತು ಎರಡು ಚೆಂಡುಗಳಲ್ಲಿ ಯಾವುದನ್ನು ಮುಂದುವರಿಸಬೇಕೆಂಬ ನಿರ್ಧಾರವು ಫೀಲ್ಡಿಂಗ್ ತಂಡದ ಕೈಯಲ್ಲಿರುದೆ ಎಂದು ಹೇಳಲಾಗಿದೆ.

ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ಸಭೆಗಳಲ್ಲಿ ಈ ಶಿಫಾರಸನ್ನು ಚರ್ಚಿಸುವ ನಿರೀಕ್ಷೆಯಿದೆ. ಇದರಲ್ಲಿ ಎಲ್ಲಾ ಆಡುವ ಸದಸ್ಯರ ಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬದಲಾದ ನಿಯಮಗಳಿಂದಾಗಿ ಬ್ಯಾಟರ್ ಗಳ ಆಟವಾಗಿರುವ ಏಕದಿನ ಕ್ರಿಕೆಟ್ ಗೆ ಮತ್ತೆ ಹಳೆಯ ರೂಪ ನೀಡಲು ಮುಂದಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಹೊಸ ನಿಯಮ ಜಾರಿಗೆ ಮುಂದಾಗಿದೆ.

 

Leave a Reply

Your email address will not be published. Required fields are marked *